ಮೌಲಾನ ಅನೀಸ್ ಕೌಸರಿಯಂತಹ ಪ್ರಬುದ್ಧ ಚಿಂತಕರ ನೇತೃತ್ವ ಮತ್ತು ಮಾರ್ಗದರ್ಶನ ಸಿಕ್ಕಿದರೆ ವಿದ್ಯಾರ್ಥಿಗಳಲ್ಲಿ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತದೆ ಎಂದು ವೈಟ್ ಸ್ಟೋನ್ ಮಾಲಕರಾದ ಉಧ್ಯಮಿ ಬಿ.ಎಂ ಶರೀಫ್ ಅಭಿಪ್ರಾಯ ಪಟ್ಟರು. ಇಂದು ಪುತ್ತೂರು ಕುಂಬ್ರದ ಕೆ.ಐ.ಸಿ ಗೆ ಟೀಂ ಬಿ ಹ್ಯೂಮನ್ ತಂಡದ ಸದಸ್ಯರೊಂದಿಗೆ ಭೇಟಿ ಕೊಟ್ಟ ಇವರು, ಮುಂದಿನ ಆಲಿಮಿಗಳು ಎಲ್ಲಾ ಕ್ಷೇತ್ರದಲ್ಲೂ ಪರಿಣತಿಯನ್ನು ಹೊಂದಬೇಕು, ಈ ನಿಟ್ಟಿನಲ್ಲಿ ಅವರಿಗೆ ಅತ್ಯುತ್ತಮ ತರಭೇತಿ ಸಿಗಬೇಕು. ಅದಕ್ಕೆ ಬೇಕಾದ ಸೌಲಭ್ಯಗಳನ್ನು ಅಭಿವೃದ್ದಿ ಪಡಿಸಲು ನಾವು ನಿಮ್ಮ ಜೊತೆಗಿದ್ದೇವೆ ಎಂದು ಅನೀಸ್ ಕೌಸರಿ ಉಸ್ತಾದರ ಜೊತೆಗಿನ ಮಾತುಕತೆಯಲ್ಲಿ ಬಿ.ಎಂ. ಶರೀಫ್ ಅವರು ಭರವಸೆ ನೀಡಿದರು.
ಕೆ.ಐ.ಸಿ ಕುಂಬ್ರದಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಆರಂಭಿಸಲಿರುವ ಸ್ಪರ್ಧಾತ್ಮಕ ತರಭೇತಿ ವಿಭಾಗಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಸಂಸ್ಥೆಯಿಂದ ಪ್ರಸಕ್ತ ವರ್ಷ ಪದವಿ ಪೂರ್ತಿಮಾಡಿ ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿಧ್ಯಾರ್ಥಿಗಳು ಸಂಸ್ಥೆಗೆ ಕೊಡುಗೆಯಾಗಿ ನೀಡಲು ಉದ್ದೇಶಿಸುವ ಪ್ರವೇಶ ದ್ವಾರದ ತ್ರಿಡಿಯನ್ನು ಟೀಂ ಬಿ ಹ್ಯೂಮನ್ ಟ್ರಸ್ಟಿಗಳಾದ ಯೂನುಸ್ ಅಹ್ಮದ್ , ಆಸಿಫ್ ಡೀಲ್ಸ್ ಹಾಗೂ ಸದಸ್ಯರಾದ ಅಲ್ತಾಫ್, ಇಮ್ತಿಯಾಝ್ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಭುದ್ದ ಭಾಷಾ ಜ್ಞಾನ ಮತ್ತು ವಾಕ್ ಚಾತುರ್ಯದ ಮೂಲಕ ಅತಿಥಿಗಳನ್ನು ಪ್ರಭಾವಿತಗೊಳಿಸಿದರು. ವಿದ್ಯಾರ್ಥಿಯೊಬ್ಬರ ಆಂಗ್ಲ ಭಾಷೆಯ ವಿಷಯ ಮಂಡನೆಯನ್ನು ಕೇಳಿದ ಯೂನುಸ್ ರವರು ಇದು ಸ್ಥಳೀಯ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ಜಾಗತಿಕವಾಗಿ ಇಸ್ಲಾಮಿನ ಸಂದೇಶ ಮತ್ತು ಮೌಲ್ಯಗಳನ್ನು ಪ್ರಸಾರ ಮಾಡುವುದನ್ನು ನಾವು ಕಾಣಲು ಅಲ್ಲಾಹನು ನಮಗೆ ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಕೆ.ಪಿ.ಅಹ್ಮದ್ ಹಾಜಿ ಆಕರ್ಶನ್ ಅವರ ದಶಕಗಳ ನಿಸ್ವಾರ್ಥ ಸೇವೆ, ದೇಶ-ವಿದೇಶದಲ್ಲಿರುವ ಕೆ.ಐ.ಸಿ ಯ ಸದಸ್ಯರು ಮತ್ತು ಬೆಂಬಲಿಗರ ಕೊಡುಗೆ ಹಾಗೂ ಅನೀಸ್ ಕೌಸರಿ ಉಸ್ತಾದರ ಆಲೋಚನೆ ಮತ್ತು ಶ್ರಮವು ಫಲ ಕೊಡುತ್ತಿದೆ. ಕೆ.ಐ.ಸಿ ಕುಂಬ್ರದಲ್ಲಿ ಭವಿಷ್ಯದ ನಾಯಕರು ಸೃಷ್ಠಿಯಾಗುತ್ತಿದ್ದಾರೆ. ಈಗಾಗಲೇ ಇವರು ಇಸ್ಲಾಮಿನ ಸಾಹಿತ್ಯ, ಜಾಗತಿಕ ವಿಜ್ಞಾನದಲ್ಲಿ ಪ್ರಬುದ್ಧತೆ ಸಾಧಿಸುತ್ತಿದ್ದಾರೆ. ಕಳೆದ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈಗಾಗಲೇ ನಲ್ವತ್ತು ವಿದ್ಯಾರ್ಥಿಗಳು ಕೌಸರಿ ಬಿರುದಿನೊಂದಿಗೆ, ಪಧವಿ ಶಿಕ್ಷಣ ಮುಗಿಸಿ ಹೊರ ಬರಲಿದ್ದಾರೆ. ಮುಂದಿನ ದಿನಗಳಲ್ಲಿ ಕೆ.ಐ.ಸಿ ಯು ನಾಡಿನ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿದೆ.
ಪ್ರಸಕ್ತ ಸಂಸ್ಥೆಯಿಂದ ಉನ್ನತ ಶಿಕ್ಷಣಕ್ಕೆ ತೆರಳಲಿರುವ ವಿಧ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ನಡೆಸಲಾಯಿತು.
✍
ಹನೀಫ್ ಪುತ್ತೂರು
ಸುನ್ನೀಟುಡೇ